ಹೊಸದುರ್ಗ
	ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ದಾವಣಗೆರೆ ಉಪವಿಭಾಗಕ್ಕೆ ಸೇರಿದ ತಾಲ್ಲೂಕನ್ನು ಉತ್ತರದಲ್ಲಿ ಹೊಳಲ್ಕೆರೆ, ಪೂರ್ವದಲ್ಲಿ ಹಿರಿಯೂರು ತಾಲ್ಲೂಕುಗಳೂ ಪಶ್ಚಿಮದಲ್ಲಿ ಚಿಕ್ಕಮಗ ಳೂರು ಜಿಲ್ಲೆಯ ತರೀಕೆರೆ, ಕಡೂರು ತಾಲ್ಲೂಕುಗಳೂ ದಕ್ಷಿಣದಲ್ಲಿ ಸ್ವಲ್ಪಭಾಗ ಕಡೂರು ತಾಲ್ಲೂಕೂ ಹೆಚ್ಚಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕೂ ಸುತ್ತುವರಿದಿವೆ. ಮಾಡದಕೆರೆ, ಶ್ರೀರಾಂಪುರ, ಹೊಸದುರ್ಗ, ಮತ್ತೋಡು ಹೋಬಳಿಗಳು. ಒಟ್ಟು 225 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 1,372.3 ಚ.ಕಿಮೀ. ಜನಸಂಖ್ಯೆ 2,19,311.

	ಹೊಸದುರ್ಗ ಬೆಟ್ಟಗುಡ್ಡಗಳ ಪ್ರದೇಶವೆನ್ನಬಹುದು. ಪೂರ್ವಘಟ್ಟ ಶ್ರೇಣಿಗೆ ಸೇರಿದ ಪಶ್ಚಿಮಶ್ರೇಣಿ ಹೊಸದುರ್ಗದಿಂದ ದಾವಣಗೆರೆ ತಾಲ್ಲೂಕಿನ ಮಾಯಕೊಂಡದ ಮುಖಾಂತರ ಅಣಜಿ ವರೆಗೂ ಹಬ್ಬಿದೆ. ಇವುಗಳಲ್ಲಿ ಈ ತಾಲ್ಲೂಕಿಗೆ ಸಂಬಂಧಿಸಿದಂತೆ ನೀರಗುಡ್ಡ ಬೆಟ್ಟಶ್ರೇಣಿ, ಕೋಟೆಕಲ್ಲು ಗುಡ್ಡ, ದೊಡ್ಡರಸಿಗುಡ್ಡ, ತಿರುಮಲದೇವರ ಗುಡ್ಡ ಮತ್ತು ಹಾಲರಾಮೇಶ್ವರ ಗುಡ್ಡ ಮುಖ್ಯವಾದವು. ಹಾಲರಾಮೇಶ್ವರ ಗುಡ್ಡ (1.181 ಮೀ) ಈ ಜಿಲ್ಲೆಗೇ ಎತ್ತರದ ಬೆಟ್ಟ. ಈ ತಾಲ್ಲೂಕಿನ ಬೂದಿಹಾಳು, ಗಂಜೆಗೆರೆ ಬಳಿ ಕಲ್ನಾರು, ಮಾರಿಕಣಿವೆ, ಮಾಡದಕೆರೆ, ಕಂಚಿಪುರ ಈ ಪ್ರದೇಶಗಳಲ್ಲಿ ಸ್ಫಟಿಕ ಜಾತಿಯ ಸುಣ್ಣಕಲ್ಲಿನ ಪದರಗಳಿವೆ. ಈ ತಾಲ್ಲೂಕಿನಲ್ಲಿ ಉತ್ತಮವಾದ ಕಬ್ಬಿಣದ ಅದುರಿದೆ. ತಾಲ್ಲೂಕಿನ ಕೆಲವೆಡೆ ವಿವಿಧ ಬಣ್ಣದ ಸುದ್ದೆಮಣ್ಣುಗಳುಂಟು. ಈ ತಾಲ್ಲೂಕಿನ ಬೂದಿಮರಡಿಯಲ್ಲಿ ಹಿಂದೆ ಚಿನ್ನ ತೆಗೆದ ಸೂಚನೆಗಳಿವೆ.

	ಈ ತಾಲ್ಲೂಕಿನಲ್ಲಿ ಕಾರಾಚಿ ಮರಗಳ ಕಾಡುಂಟು. ಈ ಅರಣ್ಯಪ್ರದೇಶ ವೇದಾವತಿ ನದಿ ಕಮರಿಯ ಉದ್ದಕ್ಕೂ ಸದಾ ಹಸುರಾಗಿ ಬೆಳೆದುಕೊಂಡಿರುತ್ತದೆ. ಉಳಿದ ಕಡೆಗಳಲ್ಲಿ ಸಾಮಾನ್ಯವಾಗಿ ಹಿಪ್ಪೆ, ಮಾವು, ಹುಣಿಸೆ, ಜಾಲಿ ಮುಂತಾದ ಮರಗಳು ಬೆಳೆಯುತ್ತವೆ. ಜೊತೆಗೆ ಉತ್ತಮ ಹುಲ್ಲುಗಾವಲುಗಳೂ ಇದ್ದು ಈ ತಾಲ್ಲೂಕಿನಲ್ಲಿ ಒಟ್ಟು 19,425 ಹೆಕ್ಟೇರ್ ಅರಣ್ಯಪ್ರದೇಶವೂ 28,456 ಹೆಕ್ಟೇರ್ ಖಾಯಂ ಹುಲ್ಲುಗಾವಲೂ ಇತ್ತು.

	ವೇದಾವತಿ ತಾಲ್ಲೂಕಿನ ಮುಖ್ಯ ನದಿ. ತಾಲ್ಲೂಕಿನ ನೈಋತ್ಯದಲ್ಲಿ ಪ್ರವೇಶಿಸಿ ಈಶಾನ್ಯಾಭಿಮುಖವಾಗಿ ಹರಿಯುವುದು. ಹಿರಿಯೂರಿನ ವಾಣಿವಿಲಾಸಪುರದ ಬಳಿ ಈ ನದಿಗೆ ಅಡ್ಡಕಟ್ಟೆ ಕಟ್ಟಿ ವಾಣಿವಿಲಾಸಸಾಗರ ನಿರ್ಮಿಸಲಾಗಿದೆ. ಜಲಾಶಯದ ಹಿನ್ನೀರು ಈ ತಾಲ್ಲೂಕಿನ ಪ್ರದೇಶದಲ್ಲಿ ಹರಡಿದೆ. ಹಿತಕರ ಹವಾಗುಣವಿದೆ. ವಾರ್ಷಿಕ ಸರಾಸರಿ ಮಳೆ 511.98 ಮಿಮೀ. ಚೋಳ, ರಾಗಿ, ಬತ್ತ, ತೊಗರಿ, ಮೆಣಸಿನಕಾಯಿ, ತೆಂಗು ಮತ್ತು ಹತ್ತಿಯನ್ನು ಬೆಳೆಯುತ್ತಾರೆ. ಪಶುಪಾಲನೆಯಿದೆ. ದೊಡ್ಡ ಜಲಾಶಯವಿದ್ದು ಮತ್ಸ್ಯೋದ್ಯಮವಿದೆ. ತಾಲ್ಲೂಕಿನಲ್ಲಿ ಕೈಮಗ್ಗದ ಬಟ್ಟೆ ತಯಾರಿಕೆ ಹೆಚ್ಚು. ತೆಂಗುನಾರಿನ ಮತ್ತು ಕೆಲವು ಗ್ರಾಮಕೈಗಾರಿಕೆಗಳೂ ಇವೆ. ಜಿಲ್ಲಾ ಹೆದ್ದಾರಿಗಳಿದ್ದು ಬೆಂಗಳೂರು-ಹುಬ್ಬಳ್ಳಿ ರೈಲುಮಾರ್ಗ ಈ ತಾಲ್ಲೂಕಿನ ಪಶ್ಚಿಮ ಗಡಿಯಲ್ಲಿ ಹಾದುಹೋಗಿದ್ದು, ಹೊಸದುರ್ಗದ ವಾಯವ್ಯಕ್ಕೆ 19 ಕಿಮೀ ದೂರದಲ್ಲಿ ಹೊಸದುರ್ಗ-ರಸ್ತೆ ರೈಲು ನಿಲ್ದಾಣವಿದೆ.	*

	ಹೊಸದುರ್ಗದ ಪೂರ್ವಕ್ಕೆ 20 ಕಿಮೀ ದೂರದಲ್ಲಿ ವೇದಾವತಿ ನದಿಯ ಬಲ ದಂಡೆಯ ಮೇಲೆ ಮತ್ತೋಡು ಗ್ರಾಮವಿದೆ. ಇದು ಹಿಂದೆ ಗಾಜಿನ ಬಳೆಗಳ ತಯಾರಿಕೆಗೆ ಪ್ರಸಿದ್ಧವಾಗಿತ್ತು. ಗಿರಿಯಪ್ಪನಾಯಕ ನೆಂಬುವನು ಸ್ಥಾಪಿಸಿದ ಪಾಳೆಯಗಾರ ವಂಶದವರು ಇಲ್ಲಿ ಆಳಿದರು. ಈ ಸಂತತಿಯ ದೊಡ್ಡಣ್ಣನಾಯಕ ಈ ಊರಿನ ಕೋಟೆ ಕಟ್ಟಿಸಿದನೆಂದೂ ವೀರಶೈವ ಧರ್ಮಾವಲಂಬಿಯಾದನೆಂದೂ ತಿಳಿದುಬರುವುದು. ಮುಂದೆ ಈ ವಂಶದ ಹಾಲಪ್ಪರಾಜನೆಂಬ ನಾಯಕ ಈ ಊರಲ್ಲಿ 1707ರಲ್ಲಿ ಮುರುಘರಾಜ ಸ್ವಾಮಿಗಳಿಗೆ ಒಂದು ಮಠ ಕಟ್ಟಿಸಿಕೊಟ್ಟನೆಂದೂ ಜೊತೆಗೆ ಒಂದು ಅಗ್ರಹಾರ ಮತ್ತು ಕೆರೆಯನ್ನು ನಿರ್ಮಾಣ ಮಾಡಿದನೆಂದೂ ತಿಳಿದುಬರುತ್ತದೆ. ಹೊಸದುರ್ಗದ ಪಶ್ಚಿಮಕ್ಕೆ 13 ಕಿಮೀ ದೂರದಲ್ಲಿರುವ ನೀರ್ಗುಂದ ಹಿಂದೆ ಜೈನರ ರಾಜಧಾನಿಯಾಗಿತ್ತೆಂದೂ ರಾಜ ಪರಮೇಶ್ವರರಾಯನೆಂಬುವನ ಮಗ ನೀಲಶೇಖರ ಈ ಊರನ್ನು ಸ್ಥಾಪಿಸಿ ಇದಕ್ಕೆ ನೀಲಾವತಿ ಪಟ್ಟಣವೆಂದು ಹೆಸರಿಟ್ಟಿದ್ದನೆಂದೂ ತಿಳಿದುಬರುವುದು. ಹೊಸದುರ್ಗದ ಆಗ್ನೇಯಕ್ಕೆ 26 ಕಿಮೀ ದೂರದಲ್ಲಿರುವ ಶ್ರೀರಾಂಪುರವನ್ನು ಹಿಂದೆ ಬೂದಿಹಾಳ ಎಂದು ಕರೆಯುತ್ತಿದ್ದರು. ಇಲ್ಲಿ 15ನೆಯ ಶತಮಾನದಲ್ಲಿ ಕಟ್ಟಿದ ಕೋಟೆಯಿದೆ.

	ಹೊಸದುರ್ಗ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಚಿತ್ರದುರ್ಗಕ್ಕೆ ನೈಋತ್ಯದಲ್ಲಿ 64 ಕಿಮೀ ದೂರದಲ್ಲಿದೆ. ಜನಸಂಖ್ಯೆ 22,480.

	ಬಾಗೂರಿನಲ್ಲಿದ್ದ ಮುಸಲ್ಮಾನರಿಂದ ಅಪಾಯವಾಗದಂತೆ ರಕ್ಷಣೆಗಾಗಿ ಚಿತ್ರದುರ್ಗದ ಪಾಳೆಯಗಾರ ಚಿಕ್ಕಣ್ಣನಾಯಕ 1676ರಲ್ಲಿ ಇಲ್ಲೊಂದು ಕೋಟೆ ಕಟ್ಟಿಸಿದನೆಂದೂ 1708ರಲ್ಲಿ ಬಾಗೂರಿನಿಂದ ಬಂದ ಒಬ್ಬ ಜಂಗಮ ಇಲ್ಲಿನ ಬೆಟ್ಟದ ಪಾದದ ಬಳಿ ಪಾಳೆಯಗಾರರ ಸಹಾಯದಿಂದ ಪೇಟೆ ಕಟ್ಟಿ ಜನ ವಾಸಿಸುವಂತೆ ಮಾಡಿದನೆಂದೂ ಪ್ರತೀತಿ. ಸ್ವಲ್ಪಕಾಲ ಇದು ಹೈದರ್ ಅಲಿ ಮತ್ತು ಮರಾಠರ ಆಳಿಕೆಗೆ ಸೇರಿದ್ದು ಅನಂತರ ಮೈಸೂರು ರಾಜ್ಯಕ್ಕೆ ಸೇರಿತು.			

	(ಎಚ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ